ಪೆನ್ಸಿಲ್ವೇನಿಯ -
	ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ರಾಜ್ಯ. ಉತ್ತರದಲ್ಲಿ ಈರೀ ಸರೋವರ ಮತ್ತು ನ್ಯೂಯಾರ್ಕ್ ರಾಜ್ಯ, ಪೂರ್ವದಲ್ಲಿ ನ್ಯೂಯಾರ್ಕ್ ಮತ್ತು ನ್ಯೂ ಜರ್ಸಿ ರಾಜ್ಯಗಳು. ದಕ್ಷಿಣದಲ್ಲಿ ಡೆಲವೇರ್, ಮೇರಿಲ್ಯಾಂಡ್ ಮತ್ತು ಪಶ್ಚಿಮ ವರ್ಜಿನಿಯ ರಾಜ್ಯಗಳು, ಪಶ್ಚಿಮದಲ್ಲಿ ಪಶ್ಚಿಮ ವರ್ಜಿನಿಯ ಮತ್ತು ಒಹೈಯೊ ರಾಜ್ಯಗಳಿವೆ. ಮುಖ್ಯವಾಗಿ ಉ.ಅ. 39043'-420 ಮತ್ತು ಪ.ರೇ. 79043"-80031' ನಡುವೆ ಹಬ್ಬಿದೆ. ಗಾತ್ರದ ದೃಷ್ಟಿಯಿಂದ ಅಮೆರಿಕ ಸಂಯುಕ್ತ ಸಂಸ್ಥಾನಗಳ 33ನೆಯ ಸ್ಥಾನ ಪಡೆದಿರುವ ಈ ರಾಜ್ಯ ಜನಸಂಖ್ಯೆಯ ದೃಷ್ಟಿಯಿಂದ ಮೂರನೆಯದು. ಇದರ ವಿಸ್ತೀರ್ಣ 1,17,413 ಚ.ಕಿ.ಮೀ; ಜನಸಂಖ್ಯೆ 12,281,054 (2000) ಇಲ್ಲಿಯ ಸೇ. 69 ರಷ್ಟು ಜನರು ನಗರ ವಾಸಿಗಳು, ಸೇ. 31 ರಷ್ಟು ಮಂದಿ ಗ್ರಾಮಸ್ಥರು. ಸೇ. 91.4 ರಷ್ಟು ಜನರು ಬಿಳಿಯರು. ವರ್ಣೀಯರು ಸೇ. 8.6 ರಷ್ಟು ಇದ್ದಾರೆ. ರಾಜಧಾನಿ ಹ್ಯಾರಿಸ್ ಬರ್ಗ್.

	ಭೌತಲಕ್ಷಣ: ರಾಜ್ಯದ ಮೇಲ್ಮೈ ಬಹಳ ವಿಶಾಲವಾದ್ದು. ಡೆಲವೇರ್ ನದಿಯೆಡೆಯ ಸಮುದ್ರಮಟ್ಟದ ನೆಲದಿಂದ ಹಿಡಿದು ಸಮರ್‍ಸೆಟ್ ಕೌಂಟಿಯ 979 ಮೀ. ಎತ್ತರದ ಪ್ರದೇಶದ ವರೆಗೆ ಏರಿಕೆಯಾಗುತ್ತದೆ. ವಾಯುವ್ಯದ ಮೂಲೆಯಲ್ಲಿ ಈರೀ ಸರೋವರದ ತೀರದ ಉದ್ದಕ್ಕೂ ತಗ್ಗಾದ ಬಯಲು ಪ್ರದೇಶವಿದೆ. ಈ ಪ್ರದೇಶದ ಆಗ್ನೇಯಕ್ಕೆ ಇರುವುದು ಆಲಿಗಾನಿ ತಪ್ಪಲು ಪ್ರದೇಶ. ಇದು ರಾಜ್ಯದ ಅತ್ಯಂತ ವಿಸ್ತಾರವಾದ ಸ್ವಾಭಾವಿಕ ವಿಭಾಗ. ಇಲ್ಲಿ ಬೆಟ್ಟ ಕಣಿವೆಗಳು ಅಲೆಅಲೆಯಾಗಿ ಹಬ್ಬಿವೆ. ಇದರ ಪೂರ್ವಕ್ಕೆ ಚೆಸ್‍ನಟ್‍ರಿಜ್, ಲಾರೆಲ್ ಹಿಲ್, ಆಲಿಗಾನಿ, ಟಸ್ಕರೋರ, ಬ್ಲ್ಯೂ, ರೊಕೋನೊ ಮತ್ತು ಕಿಟಟಿನೀ ಪರ್ವತಗಳ ಸಮಾಂತರ ಪಂಕ್ತಿಗಳನ್ನೊಳಗೊಂಡ ಅಪಲೇಚಿಯನ್ ಪ್ರಸ್ಥಭೂಮಿ ಇದೆ. ಡೇವಿಸ್ ಶಿಖರ (952 ಮೀ.) ರಾಜ್ಯದ ಅತ್ಯುನ್ನತ ಸ್ಥಳ. ಪರ್ವತ ಪಂಕ್ತಿಗಳ ಮಧ್ಯದಲ್ಲಿ ಕಂಬರ್‍ಲೆಂಡ್ ಲೆಬನನ್, ಲೀಹೈ ಮೊದಲಾದ ಸುಂದರ ಕಣಿವೆಗಳಿವೆ. ಪ್ರಸ್ಥಭೂಮಿಯ ಆಗ್ನೇಯಕ್ಕೆ ಪೀಡ್‍ಮಾಂಟ್ ತಪ್ಪಲು ಮತ್ತು ಇನ್ನೂ ಆಗ್ನೇಯಕ್ಕೆ ತಗ್ಗಾದ ಬಯಲು ನೆಲ ಇವೆ.

	ರಾಜ್ಯದ ಮುಖ್ಯ ನದಿಗಳು ಮೂರು. ನ್ಯೂಯಾರ್ಕ್‍ನಲ್ಲಿ ಉಗಮಿಸುವ ಡೆಲವೇರ್ ನದಿಗೆ ಪಶ್ಚಿಮದಿಂದ ಹರಿದು ಬರುವ ಲೀಹೈ, ಸ್ಕೂಲ್‍ಕಿಲ್ ಮತ್ತು ಅನೇಕ ಚಿಕ್ಕಪುಟ್ಟ ಹೊಳೆಗಳು ಕೂಡುತ್ತವೆ. ಇನ್ನೊಂದು ನದಿ ಸಸ್ಕ್ವಹಾನ. ಇದರ ಉತ್ತರದ ಕವಲು ನ್ಯೂಯಾರ್ಕಿನಲ್ಲೂ ಪಶ್ಚಿಮದ ಕವಲು ರಾಜ್ಯದ ಮಧ್ಯಭಾಗದಲ್ಲೂ ಉಗಮಿಸುತ್ತವೆ. ಈ ನದಿ ರಾಜ್ಯವನ್ನು ದಾಟಿ ಚೆಸಪೀಕ್ ಕೊಲ್ಲಿಯನ್ನು ಸೇರುತ್ತದೆ. ಇದರ ಉಪನದಿ ಜೂನಿಯಾಟ. ರಾಜ್ಯದಲ್ಲಿ ಹುಟ್ಟಿ ನ್ಯೂಯಾರ್ಕ್‍ನಲ್ಲಿ ಕೆಲವು ಕಿ.ಮೀ. ಹರಿದು ದಕ್ಷಿಣಕ್ಕೆ ತಿರುಗುವ ಆಲಿಗಾನಿ ನದಿ ಮತ್ತು ಪಶ್ಚಿಮ ವರ್ಜಿನಿಯದಲ್ಲಿ ಹುಟ್ಟಿ ಯಾಕಿಗಾನಿಯನ್ನು ಕೂಡಿ ಹರಿಯುವ ಮನಾಂಗಹೀಲ ನದಿ ಸೇರಿ ಒಹೈಯೊ ನದಿಯಾಗುತ್ತವೆ. ಹಲವು ಚಿಕ್ಕ ಹೊಳೆಗಳು ದಕ್ಷಿಣದಲ್ಲಿ ಪೋಟೊಮ್ಯಾಕ್ ನದಿಯನ್ನು ಇಲ್ಲವೇ ಉತ್ತರ ಈರೀ ಅಥವಾ ಆಂಟೇರಿಯೋ ಸರೋವರವನ್ನು ಸೇರುತ್ತವೆ. ಒಂದು ಕಾಲಕ್ಕೆ ನೀರ್ಗಲ್ಲಿನಿಂದ ಆಚ್ಛಾದಿತವಾಗಿದ್ದ ರಾಜ್ಯದ ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ 400 ಕ್ಕೂ ಹೆಚ್ಚು ಸ್ವಾಭಾವಿಕ ಸರೋವರಗಳಿವೆ. 

	ವಾಯುಗುಣ: ರಾಜ್ಯದ್ದು ಖಂಡಾಂತರ ವಾಯುಗುಣ. ಋತುವಿನಿಂದ ಋತುವಿಗೆ ಉಷ್ಣತೆಯಲ್ಲಿ ತೀವ್ರ ವ್ಯತ್ಯಾಸಗಳಿರುತ್ತವೆ. ನೈರುತ್ಯ ಭಾಗ ಒಹೈಯೊ ಕಣಿವೆ ಮತ್ತು ಈರೀ ತಗ್ಗು ಪ್ರದೇಶಗಳಲ್ಲಿ ಹಿಮರಹಿತ ದಿನಗಳ ಸಂಖ್ಯೆ ಹೆಚ್ಚು. ಹೆಚ್ಚು ಎತ್ತರವಾದ ಪ್ರದೇಶಗಳಲ್ಲಿ ವರ್ಷದಲ್ಲಿ 3 ರಿಂದ 5 ತಿಂಗಳುಗಳ ವರೆಗಿನ ಕಾಲ ಹಿಮರಹಿತವಾಗಿರುತ್ತದೆ. ವರ್ಷದಲ್ಲಿ ಬೀಳುವ ಸುಮಾರು 1,066 ಮಿ.ಮೀ. ಮಳೆ ಸಮಶೀತೋಷ್ಣವಲಯದ ಬೆಳೆ ಹಗೂ ಸಸ್ಯಗಳಿಗೆ ಸಾಕಾಗುತ್ತದೆ.

	ಸಸ್ಯ ಪ್ರಾಣಿಜೀವನ: ರಾಜ್ಯ ಉತ್ತರ ಅಮೆರಿಕದ ಉತ್ತರ ಮತ್ತು ದಕ್ಷಿಣ ಅರಣ್ಯಗಳ ಸಂಧಿ ವಲಯದಲ್ಲಿದೆ. ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗವನ್ನು ಕಾಡು ಆವರಿಸಿದೆ. ಇದರಲ್ಲಿ ಕೆಲವು ಪ್ರದೇಶಗಳು ಮಾತ್ರ ಮಾನವ ಸಂಪರ್ಕಕ್ಕೆ ದೂರವಾದಂಥವು. ಹಿಕರಿ, ಲೋಕಸ್ಟ್, ಮೇಪಲ್, ಚೆರಿ, ಬೀಚ್, ಕಪ್ಪಗ ವಾಲ್ನಟ್, ಎಲ್ಮ್, ಚೆಸ್‍ನಟ್, ಪಾಪ್ಲರ್, ಆಪ್, ಸೈಕಮೋರ್, ವಿಲೋ, ಲಿಂಡನ್, ಬಿಳಿ ಮತ್ತು ಹಳದಿ ಪೈನ್ ಹಾಗೂ ಇತರ ಶಂಕುಪರ್ಣಿ ಮರಗಳೂ ರಾಜ್ಯದ ಅನೇಕ ಭಾಗಗಳಲ್ಲಿ ಸಾಮಾನ್ಯವಾಗಿವೆ. ರಾಜ್ಯದಲ್ಲಿ ವನ್ಯಮೃಗಗಳು ವಿಶೇಷವಾಗಿರುವುದರಿಂದ ಬೇಟೆಯ ದೃಷ್ಟಿಯಿಂದ ಪ್ರಾಮುಖ್ಯ ಗಳಿಸಿವೆ. ಕೆಂಪು ಮತ್ತು ಕಂದು ನರಿ, ಕಡು ಬೆಕ್ಕು ಹಾಗೂ ವೀಸೆಲ್ ಆರಕ್ಷಿತ ಮಾಂಸಹಾರಿಗಳಲ್ಲಿ ಸೇರುತ್ತವೆ. ಒಂದು ಕಾಲಕ್ಕೆ ಸಾಮಾನ್ಯವಾಗಿದ್ದ ಕಪ್ಪು ಕರಡಿ, ಕೆನಡ ಲಿಂಕ್ಸ್ ಅಪರೂಪವಾಗಿವೆ. ಸ್ಕಂಕ್, ರ್ಯಾಕೂನ್, ಫೆಸಂಟ್ ಮತ್ತು ಇತರ ಬೇಟೆ ಹಕ್ಕಿಗಳೂ ಕೆಲವು ಪ್ರದೇಶಗಳಲ್ಲಿ ಜಿಂಕೆಯೂ ವಿಪುಲವಾಗಿದೆ. ಟ್ರೌಟ್, ಬಾಸ್, ಚಬ್ ಪಿಕರೆಲ್ ಮತ್ತು ಬಿಳಿಯ ಕಾರ್ಪ್ ಸೇರಿದಂತೆ 150 ಕ್ಕೂ ಹೆಚ್ಚು ಬಗೆಯ ಮೀನುಗಳನ್ನು ಹೊಳೆಗಳಲ್ಲಿ ಕಾಣಬಹುದು. 

	ಜನ: ಪೆನ್ಸಿಲ್ವೇನಿಯ ಪ್ರದೇಶಕ್ಕೆ ಯೂರೋಪಿಯನರು ಬಂದಾಗ ನಾಲ್ಕು ಪ್ರಮುಖ ಇಂಡಿಯನ್ ಗುಂಪುಗಳು ಇಲ್ಲಿದ್ದುವು. ಈಗ ಒಟ್ಟು ಸುಮಾರು 2,500 ಕ್ಕಿಂತ ಕಡಿಮೆ ಇಂಡಿಯನರು ಇಲ್ಲಿ ಉಳಿದಿದ್ದಾರೆ. ಇಲ್ಲಿಗೆ ಬಂದ ಪ್ರಥಮ ಐರೋಪ್ಯರು ಸ್ವೀಡರು ಮತ್ತು ಡಚ್ಚರು. ಇಲ್ಲಿ ನೆಲೆಸಿದ ಪ್ರಮುಖರೆಂದರೆ ಇಂಗ್ಲಿಷ್ ಕ್ವೇಕರುಗಳು. ಜರ್ಮನರೂ ಸ್ಕಾಟ್-ಐರಿಷ್ ಜನರೂ ಇತರರೂ ಅನಂತರ ಬಂದರು. ಫಿಲಡೆಲ್ಫಿಯ ಮತ್ತು ಆಲಿಗಾನಿ ಪ್ರದೇಶಗಳಲ್ಲಿ ಜನಸಾಂದ್ರತೆ ಅತ್ಯಧಿಕ. ರಾಜ್ಯದ ಸೇ. 71.5 ರಷ್ಟು ಮಂದಿ ಪಟ್ಟಣವಾಸಿಗಳು.

	ರಾಜ್ಯದ ಪ್ರಮುಖ ಪಟ್ಟಣಗಳು ಫಿಲಡೆಲ್ಫಿಯ (19,50,098) (1970), ಪಿಟ್ಸ್‍ಬರ್ಗ್ (5,20,117), ಸ್ಕ್ರ್ಯಾಂಟನ್ (1,03,564), ಆಲೆನೆಟೌನ್ (1,09,527), ರೀಡಿಂಗ್ (87,43) ಬೆತಲ್‍ಹೆಮ್ (72,686), ಅಪ್ಪರ್ ಡಾರ್ಬಿ (45,000) ಆಲ್ತೂನ (63,115) ಮತ್ತು ವಿಲ್ಕ್ಸ್‍ಬಾರ್ (58,856).

	ಆರ್ಥಿಕತೆ: ಕೈಗಾರಿಕೆ, ಗಣಿಗಾರಿಕೆ, ಕೃಷಿ, ಪ್ರವಾಸೋದ್ಯಮ ಈ ನಾಲ್ಕೂ ಕ್ಷೇತ್ರಗಳಲ್ಲಿ ರಾಜ್ಯ ಪ್ರಮುಖವಾಗಿದೆ. ಫಲವತ್ತಾದ ಕೃಷಿ ಭೂಮಿ 1,80,00,000 ಎಕರೆ ರಕ್ಷಿತ ಅರಣ್ಯ ಪ್ರದೇಶ. ಅಕ್ಷಯವೆನಿಸುವ ಕಲ್ಲಿದ್ದಲ ಪೂರೈಕೆ, ಯಾನಯೋಗ್ಯವಾದ ಜಲಮಾರ್ಗಗಳು, ಪೂರ್ವ ಕರಾವಳಿಯಲ್ಲಿ ಆಯಕಟ್ಟಿನ ಸನ್ನಿವೇಶ-ಇವುಗಳಿಂದಾಗಿ ಇದು ಅಮೆರಿಕದ ಶ್ರೀಮಂತ ರಾಜ್ಯಗಳಲ್ಲೊಂದಾಗಿದೆ. 18 ನೆಯ ಮತ್ತು 19 ನೆಯ ಶತಮಾನಗಳಲ್ಲಿ ಐಶ್ವರ್ಯ ಹಾಗೂ ಜನಸಂಖ್ಯೆಯಲ್ಲಿ ಇದು ನ್ಯೂಯಾರ್ಕಿನ ಅನಂತರ ಬರುತ್ತಿತ್ತು. ಇಂದು ಇದು ದೇಶದ ಎಲ್ಲ ಗಟ್ಟಿ ಕಲ್ಲಿದ್ದಲು ಮತ್ತು ಉಕ್ಕಿನ ನಾಲ್ಕನೆಯ ಒಂದು ಭಾಗವನ್ನು ಉತ್ಪಾದಿಸುತ್ತದೆ. 1890ರ ದಶಕದಲ್ಲಿದ್ದಷ್ಟಲ್ಲವಾದರೂ ತೈಲ ಇಲ್ಲಿಯ ಒಂದು ಗಮನಾರ್ಹ ಖನಿಜ. ವಾಣಿಜ್ಯ ದೃಷ್ಟಿಯಿಂದ ಪ್ರಪಂಚದ ಪ್ರಪ್ರಥಮ ತೈಲಕೂಪವನ್ನು 1859 ರಲ್ಲಿ ಇಲ್ಲಿಯ ಟೈಟಸ್‍ವಿಲ್‍ನ ಹತ್ತಿರ ತೋಡಲಾಯಿತು. ಈಶಾನ್ಯದಲ್ಲಿ ಹೈನುಗಾರಿಕೆ, ನೈಋತ್ಯದಲ್ಲಿ ಪಶುಸಂಗೋಪನೆ ಅಭಿವೃದ್ಧಿಗೊಳ್ಳುತ್ತಿವೆ. ಆಗ್ನೇಯದಲ್ಲಿ ಕೃಷಿ ಪ್ರಧಾನವಾಗಿವೆ. ಕೈಗಾರಿಕೆಗಳಲ್ಲಿ ಕ್ರಾಂತಿಕಾರ ಬದಲಾವಣೆ, ಕಲ್ಲಿದ್ದಲೇತರ ಇಂಧನದ ಉಪಯೋಗ. ದೇಶದ ಉಳಿದ ಪ್ರದೇಶಗಳ ಅಭಿವೃದ್ಧಿ ಈ ಕಾರಣಗಳಿಂದಾಗಿ 0ನೆಯ ಶತಮಾನದಲ್ಲಿ ಇದು ಜನಸಂಖ್ಯೆ ಮತ್ತು ಸಂಪತ್ತಿನ ದೃಷ್ಟಿಯಿಂದ ದೇಶದ 3ನೆಯ ಸ್ಥಾನಕ್ಕೆ ಇಳಿದಿದೆ.

	ದೇಶದ ಖನಿಜಗಳಲ್ಲಿ ಕಲ್ಲಿದ್ದಲು ಮುಖ್ಯವಾದ್ದು. ಈ ದೃಷ್ಟಿಯಿಂದ ಪೆನ್ಸಿಲ್ವೇನಿಯಾದ್ದು ಎರಡನೆಯ ಸ್ಥಾನ. ಲಾವೂಸಿಯಾನ, ಓಕ್ಲಹಾಮ, ಟೆಕ್ಸಾಸ್. ವನಜ್ವೀಲ ಮತ್ತು ಪಶ್ಚಿಮ ಏಷ್ಯಗಳಿಂದ ತರಲಾದ ತೈಲವನ್ನು ಡೆಲಮೇರ್‍ನ ಉದ್ದಕ್ಕೂ ಇರುವ ದೊಡ್ಡ ದೊಡ್ಡ ಕೇಂದ್ರಗಳಲ್ಲಿ ಶುದ್ಧೀಕರಿಸಲಾಗುತ್ತದೆ. ನೈಸರ್ಗಿಕ ಅನಿಲದ ಉತ್ಪಾದನೆಯ ದೃಷ್ಟಿಯಿಂದ ರಾಜ್ಯದ ಸ್ಥಾನ ದೇಶದಲ್ಲಿ 13ನೆಯದು. ಕಬ್ಬಿಣದ ಅದುರು, ಸುಣ್ಣಕಲ್ಲು, ಬೆಳ್ಳಿ, ಚಿನ್ನ, ತಾಮ್ರ, ಕೋಬಾಲ್ಟ್, ಸತು ಇವೂ ಇಲ್ಲಿ ಸ್ವಲ್ಪಮಟ್ಟಿಗೆ ದೊರಕುತ್ತವೆ. ಪಶ್ಚಿಮದಲ್ಲಿ ಉಪ್ಪಿನ ನಿಕ್ಷೇಪಗಳ ಶೋಧವಾಗಿದೆ. 

	ರಾಜ್ಯದ ಕೈಗಾರಿಕೆಗಳೂ ವೈವಿಧ್ಯಪೂರಿತವಾದವು. ಲೋಹ ವಸ್ತುಗಳು, ಬಟ್ಟೆ, ರಾಸಾಯನಿಕ, ಚಪ್ಪಟೆಗಾಜು, ಜೇಡಿಮಣ್ಣಿನ ವಸ್ತುಗಳು, ಟ್ರೇಲರ್, ವರ್ಣದ್ರವ್ಯ, ಚರ್ಮ ಹಾಗೂ ರಬ್ಬರ್ ಸರಕು, ಮುಂತಾದವು ಉತ್ಪಾದನೆಯಾಗುತ್ತವೆ. ಫಿಲಡೆಲ್ಫಿಯ ಆಲಿಗಾನಿ ಮತ್ತು ಮಾಂಟ್ಗೊಮರಿ ಕೌಂಟಿಗಳಲ್ಲಿ ಕೈಗಾರಿಕೆಗಳು ಬಹಳ ಮಟ್ಟಿಗೆ ಕೇಂದ್ರೀಕೃತವಾಗಿವೆ. 

	ರಾಜ್ಯದ ಮೂರನೆಯ ಒಂದು ಭಾಗದಷ್ಟು ಪ್ರದೇಶದಲ್ಲಿ ಸಾಗುವಳಿ ನಡೆಯುತ್ತದೆ. ರಾಜ್ಯದ ಆಗ್ನೇಯ ಭಾಗದ ಲ್ಯಾಂಕಾಸ್ಟರ್, ಯಾರ್ಕ್ ಮತ್ತು ಬಕ್ರ್ಸ್ ಕೌಂಟಿಗಳಲ್ಲಿ ಹೆಚ್ಚು ಹಿಡುವಳಿಗಳಿವೆ. ಹಾಲು, ಮೊಟ್ಟೆ, ಅಣಬೆ, ಚುಟ್ಟದ ಎಲೆ, ಸೇಬು ಮುಂತಾದವು ಬೆಳೆಯುತ್ತವೆ.

	ಸಾರಿಗೆ ಸಂಪರ್ಕ: ಪಿಟ್ಸ್‍ಬರ್ಗ್, ಫಿಲಡೆಲ್ಫಿಯ, ಈರೀ ಇವು ರಾಜ್ಯದ ಮೂರು ಉತ್ತಮ ಬಂದರುಗಳು.  ಡೆಲವೇರ್, ಸಸ್ಕ್ವಹಾನ, ಆಲಿಗಾನಿ, ಒಹೈಯೋ ಮತ್ತು ಮನಾಂಗಹೀಲ ನದಿಗಳು ಮತ್ತು ಅನೇಕ ನಾಲೆಗಳು ಯಾನ ಯೋಗ್ಯವಾಗಿವೆ. ರಾಜ್ಯದಲ್ಲಿ 1,50,422 ಕಿ.ಮೀ. ಉದ್ದದ ಹಾಸಿನ ಮಾರ್ಗಗಳೂ 12,800 ಕಿ.ಮೀ. ಉದ್ದದ ರೈಲು ಮಾರ್ಗಗಳೂ ಇವೆ. ಫಿಲಡೆಲ್ಫಿಯ ಮತ್ತು ಪಿಟ್ಸ್‍ಬರ್ಗ್‍ನಲ್ಲಿ ಪ್ರಮುಖ ವಾಣಿಜ್ಯ ವಿಮಾನ ನಿಲ್ದಾಣಗಳಿವೆ. ಇತರ 14 ನಗರಗಳಿಗೂ ವಿಮಾನ ಸೌಲಭ್ಯಗಳುಂಟು. 

	ಶಿಕ್ಷಣ: ರಾಜ್ಯದಲ್ಲಿ ಒಟ್ಟು 125 ಕ್ಕೂ ಹೆಚ್ಚು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಇವೆ. ರಾಜ್ಯದಲ್ಲಿ ಪೆನ್ಸಿಲ್ವೇನಿಯ ರಾಜ್ಯ ವಿಶ್ವವಿದ್ಯಾಲಯದ 21 ಶಾಖಾ ಕ್ಷೇತ್ರಗಳಿವೆ. ಫಿಲಡೆಲ್ಫಿಯ ವೈದ್ಯಕೀಯ ಹಾಗೂ ವಿಜ್ಞಾನ ಶಿಕ್ಷಣ ಕೇಂದ್ರವೂ ಆಗಿದೆ. 

	ಸಂವಿಧಾನ ಮತ್ತು ಸರ್ಕಾರ: ರಾಜ್ಯದ ಸಂವಿಧಾನ 1873 ರಲ್ಲಿ ಜಾರಿಗೆ ಬಂತು. 1901ರಿಂದೀಚಿಗೆ ಅದರಲ್ಲಿ ಅನೇಕ ತಿದ್ದುಪಡಿಗಳಾಗಿವೆ. ಸಂವಿಧಾನದ ನಿಯಮಗಳಿಗೆ ಅನುಗುಣವಾಗಿ ಸರ್ಕಾರ ರಚಿತವಾಗಿದೆ. ಗವರ್ನರ್, ಲೆಫ್ಟಿನೆಂಟ್ ಗವರ್ನರ್, ಅಟಾರ್ನಿ ಜನರಲ್, ಆಡಿಟರ್ ಜನರಲ್ ಮತ್ತು ಮಂತ್ರಿ ಮಂಡಲದ ಸದಸ್ಯರು, ಆಡಳಿತಾಂಗದ ಅಧಿಕಾರಿಗಳು ಗವರ್ನರನನ್ನು 4 ವರ್ಷಗಳ ಅವಧಿಗೆ ಆರಿಸಲಾಗುತ್ತದೆ. ಅವನು ಎರಡು ಅವಧಿಗಳವರೆಗೆ ಮಾತ್ರ ಅಧಿಕಾರದಲ್ಲಿರಬಹುದು. ಸೆನೆಟ್ ಹಾಗೂ ಪ್ರತಿನಿಧಿಗಳ ಸಭೆಗಳ ಸದಸ್ಯರು ಕ್ರಮವಾಗಿ 4 ಮತ್ತು 2 ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ. ಅಮೆರಿಕನ್ ಕಾಂಗ್ರೆಸ್ಸಿನ ಪ್ರತಿನಿಧಿ ಸಭೆಗೆ 30 ಸದಸ್ಯರನ್ನು ಸೆನೆಟಿಗೆ ಇಬ್ಬರು ಸದಸ್ಯರನ್ನೂ ರಾಜ್ಯ ಕಳಿಸುತ್ತದೆ. 

	ಉದ್ಯಾನಗಳು ಮತ್ತು ವಿಹಾರ ಸ್ಥಳಗಳು: ರಾಜ್ಯದಲ್ಲಿ 125 ಕ್ಕೂ ಹೆಚ್ಚು ಉದ್ಯಾನಗಳು, ಅನೇಕ ಅರಣ್ಯ ವಿಹಾರ ಸ್ಥಳಗಳು. ಅರಣ್ಯ ಸ್ಮಾರಕಗಳು ಮತ್ತು ಐತಿಹಾಸಿಕ ನಿವೇಶನಗಳು ಇವೆ. 

	ಇತಿಹಾಸ: ಪೆನ್ಸಿಲ್ವೇನಿಯಾದ ಆರಂಭ ಕಾಲದ ಇತಿಹಾಸ. ಒಂದು ಕಾಲದಲ್ಲಿ ಅದರಲ್ಲಿ ಸೇರಿದ್ದ ನೆರೆ ರಾಜ್ಯ ಡೆಲವೇರಿನ ಆರಂಭಕಾಲದ ಇತಿಹಾಸದಂತೆಯೇ ಇದೆ. ಈ ಪ್ರದೇಶದಲ್ಲಿ ಮೊದಲು ನೆಲೆಸಿದವರು ಸ್ವೀಡರು. ಅವರು ಇಲ್ಲಿ ಮೊದಲ ಬಾರಿಗೆ ಶಾಶ್ವತ ವಸಾಹತನ್ನು ಸ್ಥಾಪಿಸಿದರು (1543). ಅದು ಸ್ಕೂಲ್‍ಕಿಲ್ ನದಿಯ ಟನಿಕಮ್ ನಡುಗಡ್ಡೆಯಲ್ಲಿತ್ತು. ಹಿಂದೆ ಈ ಪ್ರದೇಶವನ್ನು ಹೊಸ ಸ್ವೀಡನ್ ಎಂದು ಕರೆಯುತ್ತಿದ್ದರು. ಸ್ವೀಡನ್ನಿನವರನ್ನು ಹಿಂಬಾಲಿಸಿದವರು ಡಚ್ಚರು (1655). 1664 ರಲ್ಲಿ ಇಂಗ್ಲಿಷರು ಈ ಪ್ರದೇಶವನ್ನು ಆಕ್ರಮಿಸಿದರು. ಇಂಗ್ಲೆಂಡಿನ ಆಗಿನ ದೊರೆ 2 ನೆಯ ಚಾಲ್ರ್ಸ್ ಅದನ್ನು ತನ್ನ ತಮ್ಮನಾದ ಡ್ಯೂಕ್ ಆಫ್ ಯಾರ್ಕ್ ಜೇಮ್ಸನ ಅಧಿಕಾರಕ್ಕೆ ಒಳಪಡಿಸಿದ. 1681 ರಲ್ಲಿ ದೊರೆ ಇದಕ್ಕೆ ಹಡಗು ಪಡೆಯ ಅಧಿಕಾರಿ ಅಡ್ಮಿರಲ್ ಪೆನ್ನನ ಹೆಸರಿಟ್ಟು, ಪೆನ್ನನ ಕಾಡು ಎಂದು ಕರೆದು, ಅವನ ಮಗ ಕ್ವೇಕರ್ ವಿಲಿಯಮ್ ಪೆನ್ನನಿಗೆ ಇದನ್ನು ದತ್ತಿಯಾಗಿ ಕೊಟ್ಟ. ಈ ಪ್ರದೇಶ ಕ್ವೇಕರ್ ಪಂಥದವರಿಗೆ ಆಶ್ರಯ ಸ್ಥಾನವಾಗಿತ್ತಾದರೂ 1701ರ ಸನ್ನಿಧಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿತ್ತು. ಈ ಪ್ರದೇಶದ ಸಾಂಸ್ಕøತಿಕ ವಿಕಾಸಕ್ಕೆ 18 ನೆಯ ಶತಮಾನದಲ್ಲಿ ಹೆಚ್ಚಿನ ಅವಕಾಶ ದೊರೆಯಿತು. ಪೆನ್ಸಿಲ್ವೇನಿಯಾದಲ್ಲಿ ನೆಲೆಸಿದ್ದ ಬೆಂಜಮಿನ್ ಫ್ರಾಂಕ್ಲಿನ್ನನ ಶ್ರಮದಿಂದಾಗಿ ಫಿಲಡೆಲ್ಫಿಯಾದಲ್ಲಿ ಮುದ್ರಣ ಮತ್ತು ಪ್ರಕಾಶನೋದ್ಯಮ ಬೆಳೆಯಿತಲ್ಲದೆ ಅದೊಂದು ಸಾಂಸ್ಕøತಿಕ ಕೇಂದ್ರವಾಯಿತು. ಫಿಲಡೆಲ್ಫಿಯಾದ ವಾಣಿಜ್ಯ ಮಹತ್ತ್ವ ಹೆಚ್ಚಿತು. ಅದು ಸಾವಿರಾರು ವಲಸೆಗಾರರಿಗೆ ಒಳನಾಡಿನ ಬಾಗಿಲಾಗಿತ್ತು. ಅನೇಕ ಜರ್ಮನ್ನರು ಅಧಿಕ ಸಂಖ್ಯೆಯಲ್ಲಿ ಆ ವಸಾಹತಿನಲ್ಲಿ ನೆಲೆಸಿ ಬೇಸಾಯದ ಹಿಡುವಳಿಗಳನ್ನು ಪ್ರಾರಂಭಿಸಿದರು. ಇಂಡಿಯನ್ನರೊಡನೆ ಪೆನ್ನನ ನ್ಯಾಯಬದ್ಧ ವ್ಯವಹಾರಗಳು ವಸಾಹತನ್ನು ಆ ಕಾಲಕ್ಕೆ ಸಾಮಾನ್ಯವಾಗಿದ್ದ ಗಡಿ ಕಲಹ ಮತ್ತು ರಕ್ತಪಾತಗಳಿಂದ ದೂರ ಇಟ್ಟಿದ್ದುವು. ಆದರೆ, ಪೆನ್ನನ ಉತ್ತರಾಧಿಕಾರಿಗಳು ಮುಖ್ಯವಾಗಿ 1746ರಲ್ಲಿ ಅಧಿಕಾರ ವಹಿಸಿಕೊಂಡ ಅವನ ಮಗ ಥಾಮಸ್ ಪೆನ್, ದೂರದೃಷ್ಟಿ ಮತ್ತು ಉದಾರನೀತಿ ಹೊಂದಿರಲಿಲ್ಲವಾದ್ದರಿಂದ 1754-1763 ರಲ್ಲಿ ಫ್ರೆಂಚರೊಡನೆಯೂ ಇಂಡಿಯನ್ನರೊಡನೆಯೂ ಕಲಹಗಳು ಸಂಭವಿಸಿದವು. ಮೇರಿಲ್ಯಾಂಡ್, ವರ್ಜಿನಿಯ, ಕನೆಕ್ಟಿಕಟ್ ಮತ್ತು ನ್ಯೂಯಾರ್ಕ್ ವಸಾಹತುಗಳೊಡನೆ ಗಡಿವಾದ ಉಂಟಾಯಿತು. ಇವುಗಳಲ್ಲಿ ವೈಯೋಮಿಂಗ್ ಕಣಿವೆಗಾಗಿ ಕನೆಕ್ಟಿಕಟ್‍ನೊಡನೆ ಬೆಳೆದ ಗಡಿವಿವಾದ ತೀವ್ರಗೊಂಡು ಪೆನ್ನಮೈಟ್ ಯುದ್ಧಗಳಿಗೆ (1789-71 ಮತ್ತು 1784) ಮೂಲವಾಯಿತು. ವಾಯುವ್ಯದ ಈರೀ ಪ್ರದೇಶವನ್ನು ಮೊದಲು ಇಂಡಿಯನ್ನರಿಂದಲೂ ಅನಂತರ ಕೇಂದ್ರ ಸರ್ಕಾರದಿಂದಲೂ ಕೊಂಡು ರಾಜ್ಯಕ್ಕೆ ಸೇರಿಸಿದ್ದರಿಂದ ಅದಕ್ಕೊಂದು ಉತ್ತಮ ಬಂದರು ದೊರಕಿತಲ್ಲದೆ ಉತ್ತರದ ಗಡಿ 42 ನೆಯ ಅಕ್ಷಾಂಶದಲ್ಲಿ ಸ್ಥಿರಗೊಂಡಿತು. 1767 ರಲ್ಲಿ ಮೇರಿಲ್ಯಾಂಡ್ ಮತ್ತು ವರ್ಜಿನಿಯಗಳೊಡನೆ ಗಡಿ ವಿವಾದಗಳು ಕೊನೆಗೊಂಡವು. ಅಮೆರಿಕನ್ ಕ್ರಾಂತಿಯಲ್ಲಿ ಪೆನ್ಸಿಲ್ವೇನಿಯ ಮುಖ್ಯ ಪಾತ್ರ ವಹಿಸಿತ್ತು. ಅನಂತರ ಪಶ್ಚಿಮ ಪ್ರದೇಶ ಮತ್ತು ಸಸ್ಕ್ವಹಾನ ಕಣಿವೆಗಳಲ್ಲಿ ನೆಲಸುಗಳು ಹೆಚ್ಚಿದುವು. ಅಮೆರಿಕನ್ ಕ್ರಾಂತಿಗೆ ಹಿಂದಿನ ವರ್ಷಗಳಲ್ಲಿ ಪೆನ್ಸಿಲ್ವೇನಿಯ ಮಹತ್ತ್ವದ ರಾಜ್ಯವಾಗಿತ್ತು. ಅದು ಸೈನಿಕ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿತ್ತು. ಅಮೆರಿಕದ ಸ್ವಾತಂತ್ರ್ಯದ ಘೋಷಣೆ ಸಹಿಯಾದ್ದು ಫಿಲಡೆಲ್ಫಿಯದಲ್ಲಿ. ಯುದ್ಧಾನಂತರ ಇದು ಅಮೆರಿಕದ ರಾಜಧಾನಿಯಾಗಿತ್ತು. 

	1790ರಲ್ಲಿ ಪೆನ್ಸಿಲ್ವೇನಿಯಾ ರಾಜ್ಯಕ್ಕೆ ಹೊಸ ಸಂವಿಧಾನ ಬಂತು. ಮುಂದಿನ ವರ್ಷಗಳಲ್ಲಿ ಬೇಸಾಯ ಯಾಂತ್ರೀಕೃತವಾಯಿತು; ರಸ್ತೆಗಳು ಸುಧಾರಿಸಿದುವು; ವಿಸ್ತಾರವಾದ ನಾಲೆಗಳ ನಿರ್ಮಾಣವಾಯಿತು. ರೈಲುಮಾರ್ಗಗಳು ರಾಜ್ಯದಲ್ಲಿ ವ್ಯಾಪಿಸಿದುವು. 1820 ರ ಅನಂತರ ರಾಜ್ಯದಲ್ಲಿ ಹಲವು ಗಣಿಗಾರಿಕೆ ಉದ್ಯಮಗಳು ಬೆಳೆದುವು. 20ನೆಯ ಶತಮಾನದಲ್ಲೂ ಇದು ಆರ್ಥಿಕವಾಗಿ ಪ್ರಮುಖವಾದ ರಾಜ್ಯಗಳಲ್ಲೊಂದಾಗಿ ಮುಂದುವರೆದಿದೆ.					(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ